ರಮಣಿ
ಚಂದ್ರನ ಚಲನೆಯ ಚೆಲುವನು ನೋಡಿ , ಚಿಟಪಟ ಮಿಂಚುವ ನಕ್ಷತ್ರವು ಕೂಡಿ ಸಾಗಿಸಿವೆ ..., ಸುಂದರ , ಸುಮಧುರ ಸಿಹಿಗಾಳಿಗಳನೆಲ್ಲಾ. ಅಲೆಯುವ ಅಲೆಗಳಂತೆ ಮೆಲ್ಲನೆ ಮೊಡವು ಮುನ್ನಡೆದಿದೆ .
ಸಪ್ಪಳ ....ಬಂದು ಬಡಿದು ಮರೆಯಾಗಿ ಸಮವಾಗಿ ಮತ್ತೆ ಅಲೆಯಾಗಿ ಬಡಿವ ಸುಮಧುರ ಏಳು ಬೀಳು ನೀರ ಗುಂಪು , ಅದು ದೋಣಿಗೆ ಕಂಪು .
ನಡು ರಾತ್ರಿ ಎರಡರ ಸಮಯ , ನಾವಿಕ ಒಬ್ಬನೇ ದೋಣಿಯಲ್ಲಿ ಬಹಳ ದೂರ ಸಾಗುತ್ತಿದ್ದಾನೆ. ಅಲೆಯ ಓಟಕ್ಕೆ ದೋಣಿ ಮೇಲೆ ಕೆಳಗೆ ಕುಪ್ಪಳಿಸುತ್ತಿದೆ. ಚಂದ್ರನ ಚೆಂದ ನೋಟಕ್ಕೆ ಮರುಳಾಗಿದ್ದಾನೆ ನಾವಿಕ. ಇದು ಆತನ ಇಷ್ಟ ಕೆಲಸ....ತೇಲುವ ದೋಣಿಯ ತುದಿಯಲ್ಲಿ ನಿಂತು ಬರುವ ಸಿಹಿ ಗಾಳಿಯನ್ನು ಸವಿಯುವ ಹುಚ್ಚು ಕೆಲಸ, ಅವನಿಗೆ ಪಾಯಸ. ಮೊದ ಮೊದಲು ಸಮುದ್ರದ ತೀರದಲಿ ನಿಂತು ನೊರೆಯನ್ನೇ ಪೊಷಾಕು ಮಾಡಿ ನಲಿಯುವ ನೀರಿನ ಆಡಂಭರವ ಕಣ್ತುಂಬಿಕೊಳ್ಳುತಿದ್ದವ, ಅದರ ಇಷ್ಟತೆ ಹೆಚ್ಚಾಗಿ ಹೆಚ್ಚಾಗಿ ಸಮುದ್ರದ ಮೇಲೆ ಒಬ್ಬನೇ ಪಯಣಿಸುವ ಹುಚ್ಚು ಕೆಲಸ ಶುರುವಾಯಿತು.
ಅದೇಕೋ ಇಂದು ಅವನಿಗೆ ಬಹಳ ದೂರ ಪಯಣಿಸಬೇಕೆಂಬ ಆಸೆ. ದೋಣಿಯ ಮೇಲೆ ಕುಳಿತವನೆ ಹೊರಡಲು ಮುಂದಾದ. ಹೊರಟ ಹೊರಟ ತಿಳಿದೋ ತಿಳಿಯದೆಯೊ ತಿಳಿಗಾಳಿಯ ತಿಳಿಸೊಗಸನು ಬಯಸಿ ಮುಂನ್ದೊದ ... ಬಹಳ ದೂರ ಪಯಣಿಸಿದ ನಂತರ ಒಮ್ಮೆಲೇ ತಿಳಿ ಗಾಳಿ ಹೆಚ್ಚಾಯಿತು. ಗಾಳಿಯ ವೇಗ ರಭಸವಾದಂತೆ ಚಂದ್ರನ ಸವಿಯುತಿದ್ದ ಕಣ್ಣುಗಳು ಸೊರ್ರನೆ ದೋಣಿಯ ಕಡೆ ದೃಷ್ಟಿಸಿತು. ಅರರೆ! ಬಹಳ ದೂರ ಬಂದಿದ್ದಾನೆ. ಸುತ್ತ ಎತ್ತ ನೋಡಿದರು ಸಮುದ್ರ , ಅವನು ಬಂದ ದಾರಿಯೇ ತಿಳಿಯುತ್ತಿಲ್ಲ ....ಬಲದಿಂದ ಬರುತಿದ್ದ ಅಲೆಗಳು ಸೊರ್ರನೆ ಎಡದಿಂದ ಬರಲು ಶುರು ಮಾಡಿವೆ. ಅಲೆಯ ಒಡೆತ ಜೋರಾಗಿದೆ. ಅಲೆಯ ಒಡೆತ ಜೊರಾದಂತೆ ಅವನ ಎದೆಯ ಬಡಿತವು ಜೋರಾಗುತ್ತಿದೆ. ದೋಣಿಯ ತುದಿಯಲ್ಲಿದ್ದವ ಹಿಂದೆ ಸರಿಯುತ್ತಾನೆ , ಬಡಪಾಯಿ ಭಯದಿಂದ ಕಂಗಾಲಾಗುತ್ತಾನೆ. ಹಿಂತಿರುಗಲು ದಾರಿ ತಿಳಿದಿಲ್ಲ ಮುಂದೇನಾಗುವುದೊ ಮನಸ್ಸು ತಿಳಿದಿಲ್ಲ . ಒಮ್ಮೆಲೇ ಕೂತುಬಿಡುತ್ತಾನೆ .
“ ಅತಿಯಾದರೆ ಅಮೃತವು ವಿಷವೆ ” ಎಂತಹ ಕರ್ಮ ಮಾಡುವುದಾದರೊ ಏನೀಗ? ಮೆಲ್ಲನೆ ದೋಣಿಯ ಮಗ್ಗುಲಿಗೆ ಬಂದು ನಿಧಾನವಾಗಿ ಸಮುದ್ರದ ಕಡೆ ನೋಡುತ್ತಾನೆ. ಅಲೆಗಳು ನೀಡುತಿದ್ದ ಖುಷಿ ಈಗ ಘರ್ಜನೆಯಾಗಿ ಬದಲಾಗಿದೆ . ತಲೆ ಭಾಗಿಸಿ ಅಲೆಯನ್ನು ಗಮನಿಸುತ್ತಿದ್ದ ...ಅವನ ಮುಖದ ಮೇಲೆ ರಪ್ಪನೆ ಅಲೆ ಬಂದು ಛಾಪಿಸುತ್ತದೆ!. ಉಪ್ಪಿನ ನೀರು ಮುಖದ ಮೆಲೆರಗಿ , ಖುಷಿ ಮಾಯವಾದ ಜೊತೆಗೆ ಮೇಲಿರುವ ಋಷಿ ಕರೆಯುತ್ತಿದ್ದಾನೊ ಎಂದೆನಿಸುತ್ತದೆ .
ಅಯ್ಯೋ! ಭಗವಂತ ಉಳಿಸಿ ಕೊಡು ನನ್ನಾ.. ಎಂದು ಮನಸಲ್ಲೇ ಪ್ರಾರ್ಥಿಸುತ್ತಾನೆ , ಕಣ್ಣು ...ಕಂಬನಿ ಇಂದ ಕೂಡಿ ಒಂದು ಹನಿ ದೋಣಿಯ ಮೇಲೆ ಬಿಳುತ್ತದೆ. ಕಣ್ಣೊರೆಸಿಕೊಂಡು ಮುಂದೇನು ಮಾಡಬೇಕೆಂದು ಚಿಂತಿಸುತ್ತಾನೆ , ಒಮ್ಮೆ ಅಲೆಯು ಜೋರಾಗಿ ಬಡಿದು ದೋಣಿಯ ಒಳ ನುಗ್ಗುತ್ತದೆ. ನಾವಿಕನ ಹೃದಯ ಬಾಯಿಗೆ ಬಂದಂತಾಗಿ ಅವಕ್ಕಾಗಿ ಬಿಡುತ್ತಾನೆ! ....
ಒಳಗೆ ನುಗ್ಗಿದ ಅಲೆಯ ನೀರು ಆ ಕ್ಷಣವೆ ಮಿಂಚಾಗಿ ಕಣ್ಮರೆಯಾಗುತ್ತದೆ. ಅರರೆ! ಇದೇನಿದು ಆಶ್ಛರ್ಯ , ನೀರು ಮಿಂಚಾಗಿ ಮಾಯಾ! ತಲೆ ಎತ್ತಿ ಆಗಸದ ಕಡೆ ನೋಡುತ್ತಾನೆ ....ವಿಚಿತ್ರ , ಎಲ್ಲವೂ ವಿಚಿತ್ರ.... ಆಕಾಶದಲಿದ್ದ ನಕ್ಷತ್ರಗಳೆಲ್ಲ ಕಣ್ಮರೆ , ಎಲ್ಲೋದವೊ ಯಪ್ಪಾ! ಎಂದು ಎದ್ದು ನಿಲ್ಲುತ್ತಾನೆ. ಸಮುದ್ರದ ಕಡೆ ಕಣ್ಣಾಡಿಸುತ್ತಾನೆ , ಎಲ್ಲವೂ ವಿಚಿತ್ರ ಘರ್ಜಿಸುತ್ತಿದ್ದ ಅಲೆಗಳು ಈಗ ಮಿಂಚುತ್ತಿವೆ. ಅಕಟಕಟಾ.....ನಾನೇನನ್ನು ನೊಡುತ್ತಿದ್ದೇನೆ , ನೀರನ್ನು ಮುಟ್ಟಬೇಕೆಂದು ಮನಸಲ್ಲೆ ಅನಿಸಿದರು ಭಯದಿಂದ ಆ ರೀತಿ ಮಾಡಲಾಗುವುದಿಲ್ಲ. ಸುತ್ತಲೂ ನೋಡುತ್ತಾನೆ ಎಲ್ಲಿ ನೋಡಿದರೂ ಮಿಂಚು! ಅಲೆಗಳು ಹೊಳೆಯುತ್ತಿವೆ ...ಯಾವ ಜಾಗದಲ್ಲಿರುವನೊ, ಹಿಂತಿರುಗುವನೊ ಇನ್ನಾವ ಜಾಗಕ್ಕೆ ಪಯಣಿಸುವನೊ ಏನು ತಿಳಿದಿಲ್ಲ. ಕೊನೆಗೂ ಮನಸ್ಸನ್ನು ಗಟ್ಟಿ ಮಾಡಿ ನೀರನ್ನು ಮುಟ್ಟಬೇಂಕೆಂದು ಮುಂದಾಗುತ್ತಾನೆ. ಅಲೆಗಳ ಕಾಂತಿ ಮತ್ತು ಘರ್ಜನೆ ಎರಡು ಕಡಿಮೆಯಾಗಿಲ್ಲ ..., ನಿಧಾನವಾಗಿ ಮುಂದೊಗಿ, ಬಡಿಯುತಿದ್ದ ಅಲೆಯ ನೀರನ್ನು ಕೈ ಬೊಗಸೆಯಲ್ಲಿ ಮೆಲೆತ್ತುತ್ತಾನೆ. ಕೈ ಹಿಡಿಯ ತುಂಬಾ ನೀರಿನೊಡನೆ ಮಿಂಚು ತುಂಬಿದೆ , ನೀರು ಕೆಳ ಹರಿದಂತೆ ಮಿಂಚು ಕೆಳ ಹರಿದು ಕೈಯಿಂದ ಮಾಯವಾಗುತ್ತದೆ. ದೋಣಿಯ ಕೆಳಗೆ ಏನೋ ವಿಚಿತ್ರ ನೆಡೆಯುತ್ತಿದೆ ಎಂಬ ಸಂಶಯ , ಯಾವುದೋ ದೊಡ್ಡ ಮೀನಿರಬೆಕೆಂಬ ಭಯ ಮೂಡುತ್ತದೆ.
(ಮನಸ್ಸಲ್ಲೇ)....ಪರಮಾತ್ಮ ಕೊಂದರೆ ಒಮ್ಮೆಲೇ ಕೊಂದು ಬಿಡು , ಭಯದಲ್ಲಿ ಕೊಲ್ಲಬೇಡ ಎಂದು ಪ್ರರ್ಥಿಸುತ್ತಾನೆ ....., ಪ್ರಾರ್ಥನೆ ಫಲವಾಯಿತೆನೊ, ಒಮ್ಮೆಲೇ ಗಾಳಿ ಹೆಚ್ಚಾಗಿ ದೋಣಿಯು ಆ ಗಾಳಿಯ ರಭಸಕ್ಕೆ ಅಲ್ಲೋಲ ಕಲ್ಲೊಲವಾಗುವಾಗ , ಮಿಂಚಿನ ಅಲೆಗಳು ರುದ್ರ ತಾಂಡವ ಆಡಿ ದೋಣಿಯ ಮೇಲೆ ಒಮ್ಮೆಲೇ ಆಕ್ರಮಣ ಮಾಡಿಬಿಡುತ್ತವೆ .
ನಾವಿಕ ಮೊದಲೇ ಹೆದರಿದ್ದ ಅದರ ತಾಂಡವಕ್ಕೆ ತತ್ ಕ್ಷಣದಲ್ಲೇ ಸಮುದ್ರದ ಒಳಗೆ ಬಿದ್ದುಬಿಡುತ್ತಾನೆ. ನೀರಿನೊಳಗೆ ಕಣ್ತೆರದರೆ ಯಾವುದೊ ದೊಡ್ಡ ಮಿಂಚಿನ ಬಂಡಿ ಚಲಿಸುತ್ತಿರುವಂತಿದೆ .... ಉಸಿರಿಡಿದು ರಭಸದಲ್ಲಿ ಮೇಲೆ ಬಂದು ದೋಣಿಯ ಹುಡುಕುತ್ತಾನೆ. ದೋಣಿಯು ಮಿಂಚಿನಿಂದ ಕೂಡಿ ಹೊಳೆಯುತ್ತಿದೆ , ಕೆಲವೇ ದೂರದಲ್ಲಿದ್ದ ದೋಣಿಯನ್ನು ವೇಗವಾಗಿ ಈಜಿ ಬಳಿ ತೆರಳಿ ಮೆಲತ್ತಲು ಪ್ರಯತ್ನಿಸುತ್ತಾನೆ. ಮಿಂಚಿನ ಸಮುದ್ರ , ಯಾವ ಪ್ರಾಣಿ ತಿನ್ನುವುದೊ ಎಂದು ಭಯ ...ಕಷ್ಟ ಪಟ್ಟು ಅಂತೂ ದೋಣಿಯ ಮೆಲತ್ತುತ್ತಾನೆ. ಬದುಕಿದೆಯ ಬಡ ಜೀವ ಎಂದು ಸುಧಾರಿಸಿಕೊಳ್ಳುತ್ತಾನೆ .
ನಿಧಾನವಾಗಿ ದೋಣಿಯ ಒಳಗಿಂದ ಮಿಂಚು ಕಣ್ಮರೆಯಾಗುತ್ತಾ ಆಗುತ್ತಾ ..
ಥತ್ ಕ್ಷಣ ದೋಣಿಯ ಒಳಗೆ ಒಂದು ಜೀವಿ ಪ್ರತ್ಯಕ್ಷ!. ಆ ಜೀವಿಯೂ ಮಿಂಚಿನಿಂದ ಕೂಡಿದೆ. ಮೆಲ್ಲನೆ ಮಿಂಚು ಮರೆಯಾಗುತ್ತ ಉದ್ದನೆಯ ಕೂದಲು ಕಾಣುತ್ತಿದೆ. ಇದಾವ ಜೀವಿ , ನಾನಿದನ್ನು ಕೊಲ್ಲಬಲ್ಲೆನೇ? ಇಲ್ಲಾ, ಇದೇ ನನ್ನನ್ನು ಕೊಂದುಬಿಡುವುದೇ? ಇದನ್ನು ಕೊಲ್ಲಲು ನನ್ನ ಬಳಿ ಯಾವುದೇ ಆಯುಧವೂ ಇಲ್ಲ . ಮತ್ತೆ ನೀರಿಗೆ ಜಿಗಿಯಲು ಮುಂದಾಗುತ್ತಾನೆ .... ಜಿಗಿಯುವ ಮುನ್ನ ಒಮ್ಮೆ ಹಿಂತಿರುಗಿ ನೋಡುತ್ತಾನೆ. ಅರೆರೆ ಇದು ಜೀವಿ ಅಲ್ಲ ಯಾವುದೊ ರಮಣಿ .....
ಮಿಂಚು, ದೇಹದಿಂದ ಮೆಲ್ಲನೆ ಮಾಯವಾಗುತ್ತಾ ಸರಿದು ಹೋಗುತ್ತಿದೆ. ಅಯ್ಯೋ! ಏನಿದು ನಾನೆನನ್ನು ನೋಡುತಿದ್ದೇನೆ? ಇದು ಸತ್ಯವೊ? ಮಿಥ್ಯವೊ? ಕನಸೋ? ನನಸೋ? ಬದುಕುವೆನೊ? ಸಾಯುವೆನೊ? ಒಂದೂ ತಿಳಿಯುತ್ತಿಲ್ಲವಲ್ಲಾ.. ಎಂದು ಯೋಚಿಸುತ್ತಾ ಮೆಲ್ಲನೆ ರಮಣಿಯ ಬಳಿ ಸಾಗುವನು. ಒಂದೊಂದು ಹೆಜ್ಜೆ ಮುಂದಿಡಬೇಕಾದರೂ ಎದೆಯ ಬಡಿತ ಢವ ಢವ ಎಂದು ಏರುತಿತ್ತು. ಈಕೆಯನ್ನು ಮುಟ್ಟಲೊ ...ಮುಟ್ಟಲು ಹೋಗಿ ನನ್ನನ್ನೇ ತಿಂದು ಬಿಟ್ಟರೆ. ಅಯ್ಯೋ! ಬೇಡ ಬೇಡ. ಮತ್ತೆ ಯೋಚಿಸುತ್ತಾ ... ಈ ಕತ್ತಲಲ್ಲಿ ಇದೊಂದು ಹೆಣ್ಣು ಜೀವ ನನ್ನನೇನು ಮಾಡಿತು. ಇಲ್ಲ ನನ್ನನ್ನು ನೋಡಿ ಅದರ ಬಳಗವನ್ನು ಕರೆದು ನನ್ನನ್ನು ಕೊಂದು ಬಿಟ್ಟರೆ , ಬೇಡ ಬೇಡ ಜೀವ ಉಳಿದು ಹಿಂದಿರುಗಿದರೆ ಸಾಕು ಎಂದು ಸುಮ್ಮನೆ ದೋಣಿಯ ಮೂಲೆಯಲ್ಲಿ ಕೂರುವನು .....
ಕೆಲ ಹೊತ್ತಿನ ನಂತರ ಆ ರಮಣಿಯ ಜೀವ ಅಲ್ಲಾಡಲು ಶುರು ಮಾಡಿತು. ದೇಹದ ಮೇಲಿನ ಭಾಗದಲ್ಲಿ ವಸ್ತ್ರವಿಲ್ಲ , ಸೊಂಟದಿಂದ ಕೆಳಗೆ ಮೀನಿನಾಕರ. ಚಪಟ್ಟೆಯಾಗಿ ಮಿಂಚುತ್ತಿರುವ ಕಾಲಿಲ್ಲದ ವಯ್ಯಾರದ ಪಾದಗಳು . ಸಮುದ್ರದಲ್ಲಿ ಅಲೆಯ ಆರ್ಭಟ ಕಡಿಮೆಯಾದರೂ ಮಿಂಚುಗಳೇನು ಕಡಿಮೆಯಾಗಿಲ್ಲ. ರಮಣಿಯ ಕೇಶದಿಂದ ಆಕೆಯ ಬೆನ್ನು ಮುಚ್ಚಿದೆ , ಮೆಲ್ಲನೆ ಆಕೆಯ ಕೈ ಬೆರಳುಗಳು ಅಲ್ಲಾಡಲು ಶುರು ಮಾಡಿದವು , ಅದನ್ನ ಕಂಡು ನಾವಿಕನ ಕಾಲುಗಳು ಅಲ್ಲಾಡಲು ಶುರುವಾದವು .....ಆಕೆಯ ಕಣ್ಣಿನ ರೆಪ್ಪೆ ನಿಧಾನವಾಗಿ ತೆರೆಯುತ್ತಿದೆ. ಅವನ ಎದೆಯ ಬಡಿತ ಚಿರತೆ ವೇಗದಲ್ಲಿ ಓಡುತ್ತಿದೆ ..
ಮೆಲ್ಲನೆ ಕಣ್ಣು ಬಿಟ್ಟ. ರಮಣಿ ಆಶ್ಚರ್ಯದಿಂದ ಅವಳಿರುವ ಜಾಗವನ್ನು ನೊಡುತ್ತಿದ್ದಾಳೆ. ಎಂದೂ ಕಂಡರಿಯದ ನಾವಿಕನ ದೋಣಿ ಅವಳ ಕಣ್ಣಂಚಿನಲ್ಲಿ ವಿಸ್ಮಯ! ಇಲ್ಲಿ ಇವನ ತುಟಿಗಳು ಶರ ವೇಗದಲ್ಲಿ ಬಡಿದುಕೊಳ್ಳುತ್ತಿವೆ. ನಾವಿಕ ತನ್ನ ಎರಡು ಕಾಲುಗಳನ್ನು ಎರೆಡು ಕೈಗಳಿಂದ ಮಡಿಸಿ ಸಣ್ಣ ಮಾಂಸದ ಮುದ್ದೆಯಂತೆ ದೋಣಿಯ ಮೂಲೆಯಲ್ಲಿ ಕುಳಿತಿದ್ದಾನೆ. ರಮಣಿ ಸುತ್ತಲೂ ಕಣ್ಣಾಡಿಸುತ್ತ ..ವಿಚಿತ್ರವಾದ ಅವಳಿರುವ ಜಾಗವನ್ನು ನೋಡುವಾಗ, ಕ್ಷಣಮಾತ್ರದಲ್ಲೇ ನಾವಿಕ ಅವಳ ಕಣ್ಣಿಗೆ ಪ್ರತ್ಯಕ್ಷ ....
ಮಲಗಿದ್ದ ಆಕೆ ಹಾಆಆಆಆಆಆಅ........ಎಂದು ಚಿಟಾರನೆ ಬಲು ಭಯಂಕರವಾಗಿ ಎಲ್ಲೆಡೆ ಕೇಳುವಂತೆ ಅವನನ್ನ ಕಂಡು ಕಿರುಚುತ್ತಾಳೆ, ಕಿರುಚುತ್ತಲೇ ಎದ್ದು ಕೂರುತ್ತಾಳೆ. ಆಕೆ ಕುಳಿತ ತಕ್ಷಣ ದೋಣಿಯ ಮೂಲೆಯಲ್ಲಿ ಕಾಲುಗಳನ್ನು ಮಾಡಿಸಿ ಕುಳಿತ ನಾವಿಕ ಆಕೆಯ ಧ್ವನಿ ಕೇಳಿ ಆಕೆಗಿಂತ ಜೋರಾಗಿ ಕಿರುಚುತ್ತಾನೆ , ಇವನ ಧ್ವನಿ ಕೇಳಿ ರಮಣಿ ವಿಚಲಿತಳಾಗಿ ಆಕೆಯ ಪಾದಗಳನ್ನ ಪಟ ಪಟ ಪಟನೆ ಬಡಿದು ಬಿಡುತ್ತಾಳೆ. ಈತನಿಗೆ ಭಯದೊಡನೆ ಆಕೆಯ ಮೆಲ್ಬಾಗದ ನಗ್ನ ದೇಹ ಕಂಡು ಆಶ್ಚರ್ಯವೂ ಆಗುತ್ತದೆ ....ಕಾಂತಿಯ ಕಣ್ಣುಗಳು , ನೀಳವಾದ ಕೇಶರಾಶಿ , ಬುದ್ಧನಂತೆ ಉದ್ದವಾದ ಕಿವಿಗಳು , ಎರಡು ಕಣ್ಣುಗಳ ಅಕ್ಕ ಪಕ್ಕ ಮಿಂಚುತ್ತಿರುವ ಮಣಿಗಳು , ಗಿಳಿಯಂತೆ ಮೂಗು , ಸಣ್ಣ ತುಟಿ , ಮೊಗದ ರಂಗೇರಿಸಲು ಹೊಳಪಾದ ಕೆನ್ನೆ , ಅಗಲವಾದ ತೋಳುಗಳು , ಸೌಂದರ್ಯ ಎಚ್ಚಿಸಲು ಎದ್ದು ಕಾಣುತ್ತಿರುವ ಸ್ತನಗಳು , ಆಕರ್ಶಕವಾದ ನುಣುಪಾದ ದೇಹ , ಸಣ್ಣ ನಡು .........ತನ್ನ ಸುಂದರ ಮೈ ಮಾಟವನು ನಾವಿಕನ ಮುಂದಿಟ್ಟು ತನ್ನ ಎರೆಡು ಕೈಗಳನ್ನು ಹಿಂದಿಟ್ಟು ಆಶ್ಚರ್ಯದಿಂದ ಅವನನ್ನೇ ನೊಡುತ್ತಿದ್ದಾಳೆ ರಮಣಿ! ಅವಳ ಕಣ್ಣಲ್ಲೂ ಭಯ , ಆತನ ಕಣ್ಣಲ್ಲೂ ಭಯ , ಆಕೆಯ ವಿಚಲಿಕೆಯನ್ನು ಕಂಡ ನಾವಿಕನಿಗೆ ಕೊಂಚ ಧೈರ್ಯ ಬಂದು ನಡುಗುತ್ತಿದ್ದವ ಸುಧಾರಿಸಿ ಕೊಳ್ಳಲಾರಂಭಿಸಿದ.
ಕೆಲವು ನಿಮಿಷಗಳು ಆತನನ್ನೇ ಗಮನಿಸಿ, ರಮಣಿ ನಿಧಾನವಾಗಿ ತನ್ನ ಕೈಗಳ ಸಹಾಯದಿಂದ ದೋಣಿಗೊರಗಿ ಕುಳಿತವಳು ನಾವಿಕನೆಡೆಗೆ ಬರಲು ಶುರುಮಾಡಿದಳು.
ಸುಧಾರಿಸಿಕೊಳ್ಳುತಿದ್ದ ನಾವಿಕನ ದೇಹ ಮತ್ತೆ ಬೆವರಲು ಶುರುವಾಯಿತು . ಒಂದೊಂದೇ ಕೈಯನ್ನು ಮುಂದೆ ಇಡುತ್ತಾ , ಭಾಗಿ , ನಯವಾಗಿ ಅವನ ಬಳಿ ಬರುತ್ತಿದ್ದಾಳೆ .... ಆ ಸುಂದರ ದೇಹವು ಅವನ ಬಳಿ ಬರಲು ಹತ್ತಿರ ಹತ್ತಿರ ಬರಲು , ಅವನಿಗೆ ಭಯದೊಡನೆ ಉಷ್ಣವೂ ಹೆಚ್ಚಾಯಿತು ....., ಆಕೆ ನಾವಿಕನ ಪೂರ್ಣ ಸಮೀಪ ಬಂದು ಅವನ ಹಣೆಯಿಂದ ಹರಿಯುವ ಹನಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾಳೆ. ಬೆವರನಿಯು ಜಾರಿ ಹರಿದಂತೆ ಆ ಜಾಗವನ್ನು ರಮಣಿ ತನ್ನ ಕೈಯಿಂದ ಸವರುತ್ತಾಳೆ. ನಾವಿಕ ಗಡ ಗಡ ನಡುಗುತ್ತಾ ಅಲ್ಲಾಡದೆ ಕುಳಿತಿದ್ದಾನೆ. ಇಬ್ಬರದೂ ಮಾತಿಲ್ಲ ....ಅವಳಿಗು ಹೊಸ ಅನುಭವ ಅವನಿಗೂ ಹೊಸ ಅನುಭವ....ಆದರೂ ಇಬ್ಬರಲ್ಲೂ ಭಾವಗಳಿಲ್ಲದ ಭವ! ಉಸಿರಾಡುವುದು, ರೆಪ್ಪೆ ಅಲುಗಾಡಿಸುವುದು ಬಿಟ್ಟರೆ ಬೇರೆ ಯಾವ ಹೊರ ಲಕ್ಷಣಗಳಿಲ್ಲ ನಾವಿಕನಲ್ಲಿ .
ರಮಣಿ ಮೆಲ್ಲನೆ ಆಕೆಯ ಮುಖವನ್ನು ಅವನ ಬಳಿ ತರುತ್ತಾಳೆ, ಅವಳ ದೇಹ ಅವನ ದೇಹಕ್ಕೆ ಮುಟ್ಟಿದಂತಾಗುತ್ತದೆ. ಆದರೂ ನಾವಿಕ ಅಲ್ಲಾಡುವುದಿಲ್ಲ. ಆಕೆ ಮತ್ತೊಮ್ಮೆ ಅವನ ಕೆನ್ನೆ, ಕುತ್ತಿಗೆ,ಎದೆಯನ್ನೆಲ್ಲಾ ಸವರುತ್ತಾಳೆ , ತೋಳನ್ನು ಮುಟ್ಟುತ್ತಾಳೆ , ನಾವಿಕನಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ನಿಧಾನವಾಗಿ ಕತ್ತನ್ನು ತಿರುಗಿಸಿ ಅವಳ ಕಡೆ ನೋಡುತ್ತಾನೆ ..............................ತತ್ ಕ್ಷಣವೇ ರಮಣಿ ಅವನ ಕುತ್ತಿಗೆಯನ್ನಿಡಿದು ಅವನನ್ನು ರಭಸವಾಗಿ ಕೆಳಗೆ ಅಪ್ಪಳಿಸಿ ಆಕೆಯ ಚುಪಾದ ಉಗುರಿನಿಂದ ನಾವಿಕನ ಎಡ ಕಣ್ಣನ್ನು ಸಿಗಿದುಬಿಡುತ್ತಾಳೆ! ರಕ್ತ ಕಣ್ಣಿನೊಳಗಿಂದ ಎರಡು ಅಡಿ ಹೊರ ಚಿಮ್ಮುತ್ತದೆ. ರಕ್ತದೊಡನೆ ಕಣ್ಣಿನೊಳಗಿದ್ದ ನರಗಳೆಲ್ಲಾ ಎಳೆ ಎಳೆಯಾಗಿ ಹೊರ ಬರುತ್ತವೆ. ಆಆಆಆಆ..... ಎಂದು ಆರ್ಭಟಿಸುತ್ತ ವಿಲ ವಿಲನೆ ಒದ್ದಾಡುವನು ನಾವಿಕ , ಅವನ ಧ್ವನಿ ಎಷ್ಟೋ ದೂರ ಕ್ರಮಿಸಿ ಮರೆಯಾಗುತ್ತದೆ. ಅವನ ದೇಹದ ಮೇಲೆ ರಮಣಿ ತನ್ನ ಸೊಂಟದ ಕೆಳ ಭಾಗದ ಮೀನಿನಾಕಾರದ ದೇಹವನ್ನು, ಬಹಳ ಗಟ್ಟಿಯಾಗಿ ಇರಿಸಿ ಬಿಟ್ಟಿರುತ್ತಾಳೆ. ಅವನ ಕುತ್ತಿಗೆಯನ್ನ ಅವಳ ಒಂದೇ ಕೈ ಇಂದ ವ್ಯಾಘ್ರಳಂತೆ ಅದುಮಿರುತ್ತಾಳೆ .
ಕಿತ್ತ ಕಣ್ಣಿನ ಭಾಗಕ್ಕೆ ತೋರ್ಬೆರಳಾಕಿ ಒಳಗೆ ಅಳಿದುಳಿದ ನರಗಳನ್ನ ಹೊರತೆಗೆಯುತ್ತಾಳೆ , ಕಿತ್ತ ಕಣ್ಣನ್ನು ಬಾಯಿಗೆ ಹಾಕಿ ಅಗಿಯುತ್ತ ಅಗಿಯುತ್ತ ರಕ್ತಗತವಾದ ಕೈಯನ್ನು ಅವಳ ಸ್ತನಕ್ಕೆ, ದೇಹಕ್ಕೆಲ್ಲಾ ಸವರುತ್ತಾ ವಿಚಿತ್ರವಾಗಿ ಕಿರುಚುವಳು. ಅವಳ ಆ ಧ್ವನಿಗೆ ಸಮುದ್ರದ ಅಲೆಯು ಎಲ್ಲೆಡೆಯಿಂದಲೂ ಆಗಮಿಸಿ ಅವಳ ಪಾದಕ್ಕೆರಗುವುದು. ಕಿತ್ತ ಕಣ್ಣನ್ನು ನುಂಗಿದ ಮೇಲೆ ನಾವಿಕನ ಒಂದು ಕಿವಿಯನ್ನು ತನ್ನ ತುಟಿಗಳಿಂದ ಕಚ್ಚಿ ಎಳೆದು ಬಿಡುವಳು! ಕಿತ್ತ ಕಿವಿಯನ್ನು ಪಕ್ಕಕಿಟ್ಟು ಅವಳ ತೋರ್ಬೆರಳು ಮತ್ತು ಹೆಬ್ಬೆರಳಿನಿಂದ ಅವನ ಕೆಳ ತುಟಿಯನ್ನಿಡಿದು ಅವಳ ಹಲ್ಲುಗಳಿಂದ ತೆಗೆದು ಬಿಡುತ್ತಾಳೆ! ಪಾಪ ನಾವಿಕನ ದೇಹ ನೊವಿನಿಂದ ವಿಲವಿಲನೆ ಒದ್ದಾಡುತ್ತದೆ .......ಆತನ ಎದೆಯ ಭಾಗವನ್ನು ಸವರಿ ಉಗುರುಗಳಿಂದ ಪರಚುತ್ತ ಮೇಲ್ಚರ್ಮವನ್ನು ಸೀಳಿ ಅವನ ಹೃದಯಕ್ಕೆ ಕೈ ಹಾಕುತ್ತಾಳೆ. ಎಷ್ಟೋ ಒಳಗಿದ್ದ ಹೃದಯ ಅವಳ ಕೈಗೆ ಸಿಗದಿದ್ದಾಗ ತನ್ನ ಎರಡೂ ಕೈ ಹಾಕಿ, ಹೊರ ಚರ್ಮವನ್ನು ಸೀಳಿ ಮತ್ತೊಮ್ಮೆ ಪ್ರಯತ್ನಿಸಿದಾಗ ಹೃದಯ ಕೈಗೆ ನಿಲುಕಿ ಅದನ್ನ ದೇಹದಿಂದ ಹೊರ ಎಳೆದುಬಿಡುತ್ತಾಳೆ. ಹೃದಯ ಹೊರ ಎಳೆದಂತೆ ಅವನ ಪ್ರಾಣ ಪಕ್ಷಿ ಹೊರ ಹೋಗಿಬಿಡುತ್ತದೆ. ಒದ್ದಾಡುತಿದ್ದ ಕೈಕಾಲುಗಳು ನಿಧಾನವಾಗಿ ಸುಮ್ಮನಾಗಿ ಬಿಡುತ್ತವೆ .
ಹೃದಯವಾ ತಿನ್ನುವ ಮೊದಲು ಉಳಿದ ಇನ್ನೊಂದು ಕಣ್ಣನ್ನು ಕೀಳಲು ಮುಂದಾಗುತ್ತಾಳೆ.ಆ ಕಣ್ಣಿಗೆ ಕೈ ಹಾಕುವ ಮುನ್ನ ಅದರಲ್ಲಿ ಆಗಸದ ನಕ್ಷತ್ರಗಳು ಪ್ರತಿಬಿಂಬಿಸುತ್ತಿರುತ್ತವೆ. ಭಯದಿಂದ ಕಣ್ಣನ್ನು ಮೇಲಾಡಿಸುತ್ತಾಳೆ ರಮಣಿ ......ಆಗಸದಲ್ಲಿ ನಕ್ಷತ್ರಗಳು ಪ್ರತ್ಯಕ್ಷ! ಸಮುದ್ರದಲ್ಲಿದ್ದ ಮಿಂಚು ಮರೆಯಾಗಿ ಸಮುದ್ರ ಸಾಮಾನ್ಯವಾಗುತ್ತಿದೆ , ವಿಚಲಿತಳಾದ ರಮಣಿ ನಾವಿಕನ ಕಿವಿ ತುಟಿ ಮತ್ತು ಹೃದಯವನ್ನಿಡಿದು ನೀರಿಗೆ ಹಾರಿಬಿಡುತ್ತಾಳೆ .
ವಿಕೃತವಾದ ನಾವಿಕನ ದೇಹ ದೋಣಿಯಲ್ಲಿ ಒಂಟಿಯಾಗಿ ಮಲಗಿಬಿಟ್ಟಿದೆ. ಅಳಿದುಳಿದ ಒಂದು ಕಣ್ಣು ಅದರಲ್ಲಿ ಮೇಲೆ ಹಾರಾಡುವ ಪಕ್ಷಿಗಳು ಪ್ರತಿಬಿಂಬಿಸುತ್ತಿವೆ
ಕತ್ತಲು ಸರಿದು ಬೆಳಕು ಹರಿದಿದೆ. ಬೆಳಕು ಹರಿಯುವ ಮುನ್ನ ಆತನ ದೇಹದಿಂದ ಜೀವ ಬೇರೆಯಾಗಿದೆ .
(ರಮ್ಯರೂಪತರಂಗದ ಕೃತಿಕಾವ್ಯ)
ಶಿವ ಕುಮಾರ್.
Comments
Post a Comment